ಕೌರವ್ಯ	

	 ಸರ್ಪರಾಜ. ಐರಾವತನೆಂಬ ನಾಗರಾಜನ ವಂಶದವ. ಅರ್ಜುನನ ಹೆಂಡತಿಯರಲ್ಲಿ ಒಬ್ಬಳಾದ ಉಲೂಪಿ ಈತನ ಮಗಳು. ಒಮ್ಮೆ ಗಂಗಾನದಿಯ ಬಳಿ ಸೇರಿದ್ದ ವಸುಗಳು ತಮ್ಮ ಹಿರಿಯನಾದ ಭೀಷ್ಮನನ್ನು ಅರ್ಜುನ ಶಿಖಂಡಿಯ ಮೂಲಕ ಶರಶಯ್ಯೆಯಲ್ಲಿ ಮಲಗುವಂತೆ ಮಾಡಿ ಆತನ ಮರಣಕ್ಕೆ ಕಾರಣನಾದುದಕ್ಕೆ ಕೋಪಾವಿಷ್ಟರಾಗಿ ಅರ್ಜುನನಿಗೆ ನರಕಪ್ರಾಪ್ತಿಯಾಗಲೆಂದು ಶಾಪವಿತ್ತದ್ದನ್ನು ಅಲ್ಲಿಯೇ ಸ್ನಾನ ಮಾಡುತ್ತಿದ್ದ ಉಲೂಪಿ ಕೇಳಿಸಿಕೊಂಡಳು. ಒಡನೆಯೇ ಆ ವೃತ್ತಾಂತವನ್ನು ತನ್ನ ತಂದೆ ಕೌರವ್ಯನಿಗೆ ತಿಳಿಸಿದಳು. ಕೂಡಲೇ ಕೌರವ್ಯ ವಸುಗಳ ಬಳಿಗೆ ಹೋಗಿ ತನ್ನ ಅಳಿಯನಿಗೆ ನರಕ ಪ್ರಾಪ್ತಿಯಾಗದಿರಲೆಂದು ಪ್ರಾರ್ಥಿಸಿದಾಗ ಅರ್ಜುನ ತನ್ನ ಮಗನೊಂದಿಗೆ ಯುದ್ಧ ಮಾಡಿ ಸೋತರೆ ಶಾಪ ವಿಮೋಚನೆಯಾಗುವುದೆಂದು ವಸುಗಳು ಪರಿಹಾರ ಹೇಳಿದರು.

ಉಲೂಪಿ ಅಂಥ ಒಂದು ಸಂದರ್ಭಕ್ಕಾಗಿ ಕಾಯುತ್ತಿದ್ದಳು. ಅಶ್ವಮೇಧಯಾಗದ ಸಮಯದಲ್ಲಿ ದಿಗ್ವಿಜಯಕ್ಕಾಗಿ ಬಿಟ್ಟ ಯಜ್ಞಾಶ್ವದ ಬೆಂಗಾವಲಿಗಾಗಿ ಯುಧಿಷ್ಠಿರ ಅರ್ಜುನನನ್ನು ಕಳುಹಿಸಿದಾಗ ಅವನ ಮಗನಾದ ಬಭ್ರುವಾಹನ ಅರಿಯದೆ ಯಜ್ಞಾಶ್ವವನ್ನು ಕಟ್ಟಿಹಾಕಿದ. ಇದರಿಂದ ಕುಪಿತನಾದ ಅರ್ಜುನ ಬಭ್ರುವಾಹನನ ಮೇಲೆ ಯುದ್ಧಹೂಡಿ ಮರಣಹೊಂದಿದ. ಅರ್ಜುನ ಮಗನಿಂದ ಸೋಲನ್ನೊಪ್ಪಿ ಶಾಪ ವಿಮುಕ್ತನಾಗುತ್ತಾನೆಂದು ಸಮಾಧಾನ ಪಡುತ್ತಿದ್ದ ಉಲೂಪಿ ಅರ್ಜುನನ ಸಾವನ್ನು ಕಂಡು ದುಃಖಾರ್ತಳಾಗಿ ತನ್ನ ತಂದೆ ಕೌರವ್ಯನನ್ನು ಮರೆಹೊಕ್ಕು ನಾಗಲೋಕದಲ್ಲಿದ್ದ ಸಂಜೀವಕರತ್ನವನ್ನು ತರಿಸಿ ಅರ್ಜುನನನ್ನು ಬದುಕಿಸಿದಳು. ಈ ವೃತ್ತಾಂತ ಜೈಮಿನಿ ಭಾರತದಲ್ಲಿ ಬಂದಿದೆ.

ಕುರುವಂಶದವರಿಗೂ ಕೌರವ್ಯರೆಂದೇ ಹೆಸರು. ಈ ವಂಶದ ಧೃತರಾಷ್ಟ್ರನ ನೂರು ಜನ ಮಕ್ಕಳನ್ನು ಕೌರವ್ಯರೆಂದು ಕರೆಯುವ ವಾಡಿಕೆಯಿದೆ. 											 (ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ